ಪ್ರಾಗ್ಭೂವಿವರಣೆ - 
ಗತ ಭೂವೈಜ್ಞಾನಿಕ ಯುಗಗಳ ಭೂವಿವರಣೆ (ಪೇಲಿಯೊಜಾಗ್ರಫಿ). ಯಾವುದೇ ದೇಶದ ಚರಿತ್ರೆಯನ್ನು ಅಭ್ಯಾಸ ಮಾಡುವಾಗ ಹಿಂದಣ ಕಾಲಗಳಲ್ಲಿ ದೊರೆತನ ಮಾಡಿದ ರಾಜರುಗಳ ರಾಜ್ಯದ ಎಲ್ಲೆ ಎಲ್ಲಿಯವರೆಗೆ ಹಬ್ಬಿತ್ತು, ರಾಜಧಾನಿ ಯಾವುದು ರಾಜ್ಯದ ಗಡಿಗಳು ಎಲ್ಲಿದ್ದುವು ಎನ್ನುವ ಅಂಶಗಳನ್ನು ಸೂಚಿಸುವ ಭೂಪಟಗಳು ಇರುವುದು ಸರಿಯಷ್ಟೆ. ಅದೇ ರೀತಿ ಭೂಚರಿತ್ರೆಯನ್ನು ಅಭ್ಯಾಸ ಮಾಡುವಾಗ ಹಿಂದಿನ ಯುಗಗಳಲ್ಲಿ ನೆಲ ಜಲಗಳ ಹರವು ಹೇಗಿತ್ತು. ಆಗಿನ ಕಾಲದ ವಾತಾವರಣ ಪರಿಸ್ಥಿತಿ ಏನು, ಪರ್ವತ ಶ್ರೇಣಿಗಳು ಎಲ್ಲಿದ್ದುವು ಸಾಗರಗಳ ನೆಲೆಗಳು ಹೇಗಿದ್ದುವು, ನದಿಗಳು ಎತ್ತಲಿಂದ ಎತ್ತಕಡೆಗೆ ಹರಿಯುತ್ತಿದ್ದುವು, ಉಷ್ಣ ಹೇಗೆ ಹರಡಿತ್ತು, ಹಿಮದಿಂದ ಮುಚ್ಚಿಹೋದ ಶೀತವಲಯಗಳು ಎಲ್ಲಿದ್ದುವು ಮುಂತಾದ ವಿವರಗಳನ್ನು ಗುರುತಿಸಬೇಕಾಗುತ್ತದೆ. ಹೀಗೆ ಗುರುತಿಸಲು ಭೂಮಿಯ ಮೇಲೆ ಈಗ ಹರಡಿರುವ ಶಿಲೆಗಳು ಮತ್ತು ಅವುಗಳಲ್ಲಿರುವ ಜೀವ್ಯವಶೇಷಗಳು ಸಾಕ್ಷ್ಯವನ್ನು ಒದಗಿಸುತ್ತವೆ.

	ಭೂಮಿ ಸೂರ್ಯನಿಂದ ಬೇರೆಯಾಗಿ ತನ್ನದೇ ಅಸ್ತಿತ್ವವನ್ನು ಪಡೆದು ಈಗ ನಾಲ್ಕು ಬಿಲಿಯನ್ (4,000,000,000) ವರ್ಷಗಳು ಸಂದವೆಂದು ಅಂದಾಜು. ಭೂಮಿಯ ಮೇಲೆ ದೊರೆಯುವ ಅತಿ ಪ್ರಾಚೀನ ಶಿಲೆಗಳ ವಯಸ್ಸು 3.8 ಬಿಲಿಯನ್ ವರ್ಷಗಳು. ಕರ್ನಾಟಕ ರಾಜ್ಯದ ಶಿಲೆಗಳೂ ಅತಿ ಪುರಾತನವಾದವು. ಹಾಸನ ಜಿಲ್ಲೆಯ ಹೇಮಾವತಿ ನದಿ ದಂಡೆಯ ಗೊರೂರು ಗ್ರಾಮದ ಬಳಿಯ ಶಿಲೆಗಳು 3.4 ಬಿಲಿಯನ್ ವರ್ಷಗಳಷ್ಟು ಹಳೆಯವು ಎಂದು ಇತ್ತೀಚೆಗೆ ನಿರ್ಧರಿಸಲಾಗಿದೆ. 3 ಬಿಲಿಯನ್ ವರ್ಷಗಳಿಗೂ ಹೆಚ್ಚು ವಯಸ್ಸಿನ ಶಿಲೆಗಳು ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ದೊರೆಯುತ್ತವೆ.

	ಈ ಅತಿ ಪ್ರಾಚೀನ ಕಾಲದಲ್ಲಿ ನೆಲ ಜಲಗಳ ಹರವು ಈಗಿನಂತಿರಲಿಲ್ಲ. ದೊಡ್ಡ ದೊಡ್ಡ ಭೂಖಂಡಗಳಾದ, ಏಷ್ಯ, ಯೂರೊಪ್, ಅಮೆರಿಕ, ಆಸ್ಟ್ರೇಲಿಯ ಇವು ಬೇರೆ ಬೇರೆಯಾಗಿ ಖಂಡಭಾಗಗಳಾಗಿರಲಿಲ್ಲ. ಮೊದಲಿಗೆ ನೆಲಭಾಗವೆಲ್ಲ ಒಂದೇ ಆಗಿದ್ದು ಸಾಗರದಿಂದ ಆವೃತವಾಗಿತ್ತು. ಕ್ರಮೇಣ ಬೃಹತ್ತರ ಭೂಖಂಡದಲ್ಲಿ ಬಿರುಕುಗಳು ತಲೆದೋರಿ ಒಡೆದ ಭಾಗಗಳು ದೂರ ದೂರ ಸರಿಯುತ್ತ ಹೋದುವು. ಹೀಗೆ ಚದರಿದ ಭೂಖಂಡಗಳ ನಡುವಿನ ಪ್ರದೇಶ ನೀರಿನಿಂದ ತುಂಬಿಕೊಂಡು ಮಹಾಸಾಗರಗಳಾದುವು. ಮೊದಲು ಒಂದಾಗಿದ್ದ ಬೃಹತ್‍ಖಂಡ ಬಿರುಕುಬಿಟ್ಟು ಬೇರೆಯಾಗಿ ದೂರ ದೂರ ಸರಿದು ಈಗಿರುವ ಸ್ಥಿತಿ ಮುಟ್ಟಿರುವುದು. 	
				(ನೋಡಿ- ಖಂಡಗಳ-ಅಲೆತ)
	ಹಿಂದಿನ ಕಾಲಗಳಲ್ಲಿ ಭೂಮಿ ಯಾವ ಯಾವ ಅವಸ್ಥೆಗಳನ್ನು ಕಂಡಿತ್ತು ಎನ್ನುವುದನ್ನು ಗುರುತಿಸುವುದಕ್ಕೆ ಈಗ ನಮ್ಮ ಕಣ್ಣ ಮುಂದೆ ವಿವರವಾಗಿ ನಡೆಯುತ್ತಿರುವ ಪ್ರಕೃತಿ ವ್ಯಾಪಾರಗಳ ಪರಿಶೀಲನೆಯೇ ಪ್ರಮಾಣ. ಹೊಸದಾಗಿ ಕಟ್ಟಿದ ಮನೆ ವರ್ಷ ಕಳೆದ ತರುವಾಯ ಬಣ್ಣಗೆಟ್ಟು ಬಿರುಕುಬಿಟ್ಟು ಗೋಡೆಗಳುರುಳಿ ನೆಲಸಮವಾಗುವುದನ್ನು ಗುರುತಿಸಿದ್ದೇವೆ. ಸಹಸ್ರಾರು ವರ್ಷಗಳು ಇಂಥ ವಿಧ್ವಂಸಕಾರ್ಯ ನಡೆಯುತ್ತ ಹೋದರೆ, ಎದ್ದುನಿಂತಿರುವ ಬೆಟ್ಟದ ಭಾಗಗಳು ಕೆಳಗುರುಳುತ್ತವೆ. ಕೆಳಗುರುಳಿದ ಕಲ್ಲು, ಗುಂಡು, ಮಣ್ಣನ್ನು ಹತ್ತಿರದ ನದಿ ಹಳ್ಳಗಳು ದೂರ ದೂರ ಸಾಗಿಸಿಬಿಡುತ್ತವೆ. ಈ ವ್ಯಾಪಾರ ತಡೆಯಿಲ್ಲದೆ ನಿರಂತರವಾಗಿ ನಡೆಯುತ್ತ ಹೋದರೆ ಎದ್ದುನಿಂತಿರುವ ಬೆಟ್ಟಸಾಲುಗಳು ಕೂಡ ಕ್ರಮೇಣ ಬೋಳು ಬಯಲಾಗಿ ಮಾರ್ಪಡುವುದರಲ್ಲಿ ಸಂಶಯವೇನಿದೆ? ಹೀಗೆ ಬೆಟ್ಟವಾಗಿ ನಿಂತ ಪ್ರದೇಶ ಬಯಲಾಗುವುದನ್ನೂ ಬಯಲಾದ ಬೋಳು ಭೂಮಿಯ ಮೇಲೆ ಸಾಗರದ ನೀರು ಹೊರಳಿ ನೆಲ ಮುಳುಗಡೆಯಾಗುವುದನ್ನೂ ಅಂಥ ಸ್ಥಳದಲ್ಲಿ ನದಿಗಳು ಹೊತ್ತು ತಂದ ಕಲ್ಲು ಮಣ್ಣೆಲ್ಲವೂ ಶೇಖರವಾಗುವುದನ್ನೂ ಭೂಚರಿತ್ರೆಯಲ್ಲಿ ಮತ್ತೆ ಮತ್ತೆ ಗುರುತಿಸಬಹುದು. ಹಿಮಾಲಯ ಪರ್ವತ ಪ್ರಾಂತ, ಅದರ ಮುಂಬರುವ ಗಂಗಾ ಸಿಂಧೂ ಬ್ರಹ್ಮಪುತ್ರಾ ನದಿಗಳ ವಿಶಾಲ ಬಯಲು, ಈಗ ಜನಭರಿತ ವಾಗಿರುವ ಉತ್ತರ ಪ್ರದೇಶ, ಬಿಹಾರ, ಬಂಗಾಳಗಳ ಬಹುಮುಖ್ಯವಾದ ಭಾಗಗಳು ಹಿಂದೆ ಸಾಗರದಿಂದ ಆವೃತವಾಗಿದ್ದುವು. ಹಿಮಾಲಯ ಪರ್ವತಶ್ರೇಣಿ ನೀರಿನಿಂದೆದ್ದು ಬೆಟ್ಟವಾಗಿ ನಿಂತ ಬಳಿಕ ನದಿಗಳು ಹೊತ್ತು ತಂದ ಮೆಕ್ಕಲು ಮಣ್ಣಿನಿಂದ ಭೂಮಧ್ಯದ ಸಾಗರತುಂಬಿ ಈಗಿನ ಉತ್ತರ ಪ್ರದೇಶ, ಬಿಹಾರ, ಬಂಗಾಳ ಪ್ರದೇಶ ಈ ರೀತಿ ಹುಟ್ಟಿಕೊಂಡವು.

	ಹಿಂದಿನ ಕಾಲಗಳಲ್ಲಿ ವಾತಾವರಣ ಯಾವ ರೀತಿ ಇತ್ತು ಎನ್ನುವುದನ್ನು ಗುರುತಿಸಲು ಶಿಲೆಗಳು ಸಾಕ್ಷ್ಯವನ್ನು ಒದಗಿಸುತ್ತವೆ. ಹವಳ ಬೆಳೆಯುವುದಕ್ಕೆ ಸಮಶೀತೋಷ್ಣ ವಾತಾವರಣವಿರಬೇಕು. ವರ್ಷದುದ್ದಕ್ಕೂ ನೀರಿನ ಮೇಲೆ ಬಿಸಿಲು ಆಡುತ್ತಿರಬೆಕು. ಆಗ ಮಾತ್ರ ಹವಳ ಜಂತುಗಳು ವಿಶೇಷವಾಗಿ ಬೆಳೆದು ಸುಣ್ಣ ಸಂಬಂಧವಾದ ಗೂಡುಗಳನ್ನು ಕಟ್ಟಲು ಸಾಧ್ಯ. ಹೀಗೆ ಹವಳ ಕಟ್ಟಿದ ಶಿಲೆಗಳು ಈಗ ಹಿಮದಿಂದ ಆವೃತವಾಗಿರುವ ಶೀತವಲಯಗಳಲ್ಲಿ ಕಾಣುತ್ತಿವೆ. ಈ ಖಂಡ ಭಾಗಗಳು ಹಿಂದೆ ಇನ್ನೂ ದಕ್ಷಿಣಕ್ಕಿದ್ದಿರಬೇಕು. ಈಚಿನ ಯುಗಗಳಲ್ಲಿ ಉತ್ತರಕ್ಕೆ ಸರಿಯುತ್ತ ಬಂದು ಈಗ ಅತಿ ಶೀತವಲಯವನ್ನು ಮುಟ್ಟಿವೆ ಎಂದು ಊಹಿಸಲು ಸಾಧ್ಯವಾಗುತ್ತದೆ.

	ಶೀತವಲಯಗಳಲ್ಲಿಯ ಪ್ರದೇಶ ಈಗ ದಟ್ಟವಾದ ಹಿಮಾನಿಗಳಿಂದ (ಗ್ಲೇಶಿಯರ್ಸ್) ಮುಚ್ಚಿಹೋಗಿವೆ. ಹಿಂದಿನ ಯುಗಗಳಲ್ಲಿ ವಾತಾವರಣ ಬೇರೆ ರೀತಿಯಾಗಿತ್ತು ಎನ್ನುವುದನ್ನು ಅಲ್ಲಿಯ ಶಿಲೆಗಳು ಸಾಕ್ಷ್ಯ ನುಡಿಯುತ್ತವೆ. ಭೂಮಿಯ ವಾತಾವರಣ ಒಂದೇ ಸಮವಾಗಿರಲಿಲ್ಲ. ಉಷ್ಣ ಶೀತ ಇವು ಬದಲಾಗುತ್ತ ಹೋಗಿರುವುದು ಕಂಡುಬರುತ್ತದೆ. ಪ್ರಾಚೀನ ಯುಗಗಳಲ್ಲಿ ಇಂಡಿಯಾದ ಉತ್ತರ ಭಾಗಗಳೆಲ್ಲ ಹಿಮಾನಿಗಳಿಂದ ಆವೃತವಾಗಿದ್ದುವು ಎನ್ನುವುದಕ್ಕೆ ಪ್ರಬಲ ಸಾಕ್ಷ್ಯ ಉಂಟು. ಉಷ್ಣ ಹೆಚ್ಚಿದಾಗ ಹಿಮಾನಿಗಳು ಕರಗಿ. ಅವುಗಳ ನೀರೆಲ್ಲವೂ ಸಾಗರ ಸೇರಿ ಅದರ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗಿರುವುದು ಕಂಡುಬರುತ್ತದೆ. ಇಂಥ ಯುಗಗಳಲ್ಲಿ ಸಮುದ್ರದ ಅಂಚಿನಲ್ಲಿರುವ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗುತ್ತವೆ. ಶೀತಾಂಶ ಹೆಚ್ಚಿದ ಯುಗಗಳಲ್ಲಿ ನೀರೆಲ್ಲವೂ ಘನೀಭವಿಸಿ ಭೂಖಂಡಗಳ ಮೇಲೆ ರಾಶಿರಾಶಿಯಾಗಿ ಹೆಪ್ಪುಗಟ್ಟಿ, ಸಾಗರದಲ್ಲಿಯ ನೀರು ಹಿಂದೆ ಸರಿಯುತ್ತದೆ. ಭೂಭಾಗ ಹೆಚ್ಚುತ್ತದೆ. ಇದರ ಫಲವಾಗಿ ಪ್ರಾಣಿ ಸಸ್ಯವರ್ಗಗಳ ಹರವಿನಲ್ಲಿ ಅನೇಕ ಬಗೆಯ ವ್ಯತ್ಯಾಸಗಳುಂಟಾಗುತ್ತವೆ. ಈಗ ನಾವಿರುವ ಯುಗದಲ್ಲಿ ಉಷ್ಣ ಪ್ರಧಾನವಾಗಿದೆ. ಹಿಂದೆ ಹೀಗಿರಲಿಲ್ಲ. ಯೂರೋಪ್ ಅಮೆರಿಕ ಖಂಡಗಳ ಬಹುಭಾಗ ಹಿಮಾನಿಗಳಿಂದ ಆವೃತವಾಗಿದ್ದುವು. ಉಷ್ಣವೇರುತ್ತ ಬಂದಂತೆ ಈ ಹಿಮಾನಿಗಳು ಕರಗಿ ಅವುಗಳಿದ್ದ ಪ್ರದೇಶದಲ್ಲೆಲ್ಲ ಅಗಾಧವಾದ ಸರೋವರಗಳು ಹುಟ್ಟಿಕೊಂಡವು. ಕೆನಡಾ ಅಮೆರಿಕ ರಾಜ್ಯಗಳಲ್ಲಿ ಕಾಣುವ ಬೃಹತ್ ಸರೋವರಗಳೆಲ್ಲವೂ ಹಿಮಾನಿಗಳ ದೆಸೆಯಿಂದ ರೂಪುಗೊಂಡಂಥವು. ಭೂಮಿಯ ಮೇಲೆ ಈ ರೀತಿ ಆಗುತ್ತಬಂದಿರುವ ಬದಲಾವಣೆಗಳನ್ನು ಭೂವಿಜ್ಞಾನಿಗಳು ಗುರುತಿಸುತ್ತಾರೆ. ಸಾಗರತಳದಲ್ಲಿ ರೂಪುಗೊಳ್ಳುತ್ತಿರುವಂಥ ಜಲಜ ಶಿಲೆಗಳು ಈಗ ನೆಲವಾಗಿರುವ ಬಹುಭಾಗಗಳಲ್ಲಿ ಅನೇಕ ಕಡೆ ಕಾಣುತ್ತವೆ. ಗೌರೀ ಶಂಕರದಂಥ ಅತ್ಯುನ್ನತ ಪರ್ವತದ ಮೇಲಿನ ಶಿಲೆಗಳು ಕೂಡ ನೀರಿನಲ್ಲಿ ರೂಪುಗೊಂಡ ಲಕ್ಷಣಗಳನ್ನು ತೋರಿಸುತ್ತವೆ. ಇವು ಈಗ ಕಾಣುವ ಕಡೆ ಹಿಂದೆ ಮಹಾಸಾಗರವಿತ್ತೆನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಒಂದು ಯುಗದಲ್ಲಿ ನೆಲವಾಗಿದ್ದ ಭಾಗ ಇನ್ನೊಂದು ಯುಗದಲ್ಲಿ ಜಲದಿಂದ ಆವೃತವಾಗಿರುತ್ತದೆ. ಆಗಿಂದಾಗ್ಗೆ ಭೂಚರಿತ್ರೆಯಲ್ಲಿ ಕ್ಷೋಭೆಗಳುಂಟಾಗಿ ಇಂಥ ವ್ಯತ್ಯಾಸಗಳಾಗುವುದಕ್ಕೆ ದಾರಿಮಾಡಿಕೊಡುತ್ತವೆ. ಅಂಥ ಕಾಲಗಳಲ್ಲಿ ಸಾಗರದಲ್ಲಿ ಮಟ್ಟವಾಗಿ ಪದರ ಪದರವಾಗಿ ಶೇಖರವಾಗಿದ್ದ ಶಿಲೆಗಳು ಮಡಿಕೆ ಬಿದ್ದು, ಜಲದ ಮಟ್ಟದಿಂದ ಮೇಲೆದ್ದು ಪರ್ವತ ಪಂಕ್ತಿಯಾಗಿ ನಿಲ್ಲುತ್ತವೆ. ಇಂಥ ಕ್ಷೋಭೆ, ಪ್ರಳಯಗಳಾದ ಕಾಲಗಳನ್ನು ಗುರುತಿಸಿ ಭೂಚರಿತ್ರೆಯನ್ನು ವಿವಿಧ ಯುಗಗಳಾಗಿ ವಿಂಗಡಿಸಿದ್ದಾರೆ. ಒಂದೊಂದು ಯುಗದಲ್ಲೂ ನೆಲ ಜಲಗಳ ಹರವು ಯಾವ ರೀತಿ ಇತ್ತು ಎನ್ನುವುದನ್ನು ಈಗ ಕಣ್ಣಿಗೆ ಕಾಣುವ ಶಿಲೆಗಳ ಆಧಾರದ ಮೇಲೆ ಗುರುತಿಸಿ ನಕಾಶೆಗಳನ್ನು ತಯಾರಿಸಿ ಹಿಂದಣ ಯುಗಗಳಲ್ಲಿ ಭೂಮಿ ಯಾವ ಯಾವ ಅವಸ್ಥೆಗಳನ್ನು ಕಾಣುತ್ತ ಬಂದಿದೆ ಎನ್ನುವುದರ ವಿವರಗಳನ್ನು ಕೊಡುವ ಭೂವಿಜ್ಞಾನ ಭಾಗವೇ ಪ್ರಾಗ್ಭೂವಿವರಣೆ.	      
(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ